ಅನಾನಸ್ (ಪೈನ್‍ಆ್ಯಪಲ್)
	ಬ್ರೊಮಿಲಿಯೇಸೀ ಕುಟುಂಬಕ್ಕೆ ಸೇರಿದೆ. (ಪೈನ್‍ಆ್ಯಪಲ್) ಇದು ನಮ್ಮ ದೇಶದ್ದಲ್ಲ, ಅಮೆರಿಕದಿಂದ ಬಂದದ್ದು. ಇದರ ಅಂತರರಾಷ್ಟ್ರೀಯ ಬಳಕೆಯ ಹೆಸರನ್ನೇ ಕನ್ನಡದಲ್ಲೂ ಬಳಸಲಾಗುತ್ತಿದೆ.

	ಅನಾನಸ್ ಸೆಟೈವ ಇದರ ವೈಜ್ಞಾನಿಕ ಹೆಸರು. ಅದರ ಹಣ್ಣು ಮತ್ತು ಹಣ್ಣಿನಿಂದ ಉತ್ಪತ್ತಿಯಾಗುವ ಷರಬತ್ತು, ಜಾಮ್ ಮೊದಲಾದುವುದಗಳಿಗಾಗಿ ಮಲಯ, ಬರ್ಮ, ಭಾರತ ಮತ್ತು ಇತರ ಅನೇಕ ದೇಶಗಳ ಗುಡ್ಡ ಸೀಮೆಗಳಲ್ಲಿ ಬೆಳೆಯುತ್ತಾರೆ.

	ಇದರ ಕಾಂಡ ಪುಟ್ಟದಾಗಿ ಅನೇಕ ಎಲೆಗಳಿಂದ ಸುತ್ತುವರಿದಿದ್ದು ಕತ್ತಾಳೆ ಗಿಡವನ್ನು ಹೋಲುತ್ತದೆ. ಹಲಸಿನ ಹಣ್ಣಿನಂತೆ ಇದರಲ್ಲಿ ಹೂ ಗೊಂಚಲೇ ಹಣ್ಣಾಗುತ್ತದೆ. ಹೂಗಳನ್ನೊಳಗೊಂಡ ಅಕ್ಷದಿಂಡು, ಬ್ರಾಕ್ಟ್ ಮತ್ತು ಅಂಡಾಶಯಗಳು ರಸಭರಿತವಾಗಿರುವುದರಿಂದ ತಿನ್ನಲು ಯೋಗ್ಯ.

	ಒಮ್ಮೆ ಗಿಡಹಾಕಿದರೆ, ಬಾಳೆಯ ಗಿಡದಂತೆ ಬುಡದಲ್ಲೆ ಹೊಸ ಗಿಡಗಳು ಬೆಳೆಯುತ್ತವೆ. ಕಂದು ಅಥವಾ ಹಣ್ಣಿನ ಮೇಲ್ಭಾಗದಲ್ಲಿರುವ ಎಲೆಗಳನ್ನೊಳಗೊಂಡ ಕಾಂಡಭಾಗಗಳನ್ನು ನೆಟ್ಟರೂ ಹೊಸಗಿಡ ಬರುತ್ತದೆ. 
ಹಣ್ಣಿನ ಗಾತ್ರ ಮತ್ತು ರುಚಿಯ ಮೇಲೆ ಇದನ್ನು ರಾಣಿ, ಸಯನ್ನಿ ಮತ್ತು ಸ್ಪ್ಯಾನಿಷ್ ಎಂದು ಮೂರು ಗುಂಪು ಮಾಡಿದ್ದಾರೆ. ರಾಣಿ ಬಗೆಯ ಗಿಡಗಳು ಒಣ ಹವೆಯಲ್ಲಿ ಬೆಳೆದರೂ ಸಿಹಿಯಾದ ಹಣ್ಣುಗಳನ್ನು ಕೊಡುತ್ತವೆ; ಉಳಿದ ಜಾತಿಯ ಗಿಡಗಳು 6-7 ಪೌಂಡ್ ತೂಕವುಳ್ಳ ಹಣ್ಣುಗಳನ್ನು ಬಿಟ್ಟರೂ ಚೆನ್ನಾಗಿ ವ್ಯವಸಾಯ ಮಾಡದಿದ್ದರೆ ಬೆಳೆಯುವುದಿಲ್ಲ. ಈ ಹಣ್ಣನ್ನು ಅದರ ತಳಭಾಗ ಹಳದಿ ಬಣ್ಣಕ್ಕೆ ತಿರುಗಿದಾಗ ಇಲ್ಲವೆ ಹೂವಿನ ಮಧ್ಯದಲ್ಲಿ ಕಣ್ಣಿನಂತಿರುವ ಭಾಗದ ಹಸಿರು ಇಳಿಮುಖವಾದಾಗ ಕೀಳಬೇಕು. ಮೊದಲೆ ಕಿತ್ತರೆ ಹಣ್ಣು ಮಾಗುವುದಿಲ್ಲ. ರುಚಿಯಾಗೂ ಇರುವುದಿಲ್ಲ. ಹವಾಯಿ ದ್ವೀಪದಲ್ಲಿ ಒಂದು ಎಕರೆಯಲ್ಲಿ 40 ಟನ್ನಿನಷ್ಟೂ ಇತರ ದೇಶಗಳಲ್ಲಿ ಸರಾಸರಿ 6-10 ಟನ್ನಿನಷ್ಟೂ ಈ ಹಣ್ಣನ್ನು ಬೆಳೆಯುತ್ತಾರೆ. ಹಣ್ಣುಗಳನ್ನು ಹದವರಿತು ಕತ್ತರಿಸಿ ಕೆಡದ ಹಾಗೆ ಡಬ್ಬಿಗಳಲ್ಲಿ ತುಂಬಿ ಮೊಹರುಮಾಡಿ ಇತರ ದೇಶಗಳಿಗೆ ರಫ್ತು ಮಾಡುತ್ತಾರೆ. ಹಣ್ಣಿನ ಉಳಿದ ಭಾಗ ದನಗಳಿಗೆ ಪೌಷ್ಟಿಕ ಆಹಾರವಾಗಿದೆ.

	ಮಾಗದ ಹಣ್ಣಿನ ರಸ ಭೇದಿಯನ್ನೂ ಹೆಂಗಸರಿಗೆ ಗರ್ಭಪಾತವನ್ನೂ ಉಂಟು ಮಾಡುತ್ತದೆ. ಮಾಗಿದ ಹಣ್ಣಿನ ರಸ ಮೂತ್ರಸ್ರಾವವನ್ನು ಉತ್ತೇಜಿಸುತ್ತದೆ.

	ಹೊಳಪಾಗಿಯೂ ಗಟ್ಟಿಯಾಗಿಯೂ ಇರುವ ಎಲೆನಾರಿನಿಂದ ಒಂದು ವಿಧವಾದ ಬಟ್ಟೆಯನ್ನು ನೇಯುವರು. ಅದು ನೀರಿನಲ್ಲಿ ನೆನೆಯುವುದಿಲ್ಲ. ಲಿನನ್ ದಾರದ ಬಟ್ಟೆಗಿಂತಲೂ ಅನಾನಸ್ ದಾರದ ಬಟ್ಟೆ ಮೃದುವಾಗಿಯೂ ಹೊಳಪಾಗಿಯೂ ಇದ್ದು ಬಹಳ ಕಾಲ ಬಾಳಿಕೆ ಬರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಈ ಗಿಡದ ಎಲೆಗಳ ನಾರಿನಿಂದ ಬಟ್ಟೆ, ಕರವಸ್ತ್ರ, ಜಮಖಾನವನ್ನು ನೇಯುತ್ತಾರೆ. ಯಂತ್ರದ ಸಹಾಯದಿಂದ ಎಲೆಗಳಿಂದ ನಾರನ್ನು ತೆಗೆಯುತ್ತಾರೆ. ನಾರಿಗಾಗಿ ಗಿಡಗಳನ್ನು ಬೆಳೆಸುವುದಾದರೆ ಒತ್ತಾಗಿ ನೆಡಬೇಕು. ಹೀಗೆ ನೆಟ್ಟರೆ ಎಲೆ 3'-4' ಉದ್ದ ಬೆಳೆಯುತ್ತದೆ. ನಾರು ತೆಗೆದ ಅನಂತರ ಉಳಿಯುವ ವಸ್ತುವನ್ನು ಕಾಗದ ತಯಾರಿಕೆಗೆ ಉಪಯೋಗಿಸುತ್ತಾರೆ.
(ಎಚ್.ಎನ್.ಸಿ.; ಎ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ